ಟೈಟಸ್
39-81. ಟೈಟಸ್ ಫ್ಲೇವಿಯಸ್ ಸಬೈನಸ್ ವೆಸ್ಟೀಷಿóಯೇನಸ್ ಎಂಬುದು ಇವನ ಪೂರ್ತಿ ಹೆಸರು. ರೋಮಿನ ಫ್ಲೇವಿಯನ್ ಚಕ್ರವರ್ತಿಗಳ ಪೈಕಿ ಎರಡನೆಯವ (79-81). ವೆಸ್ಪೇಷಿóಯನನ ಇಬ್ಬರು ಗಂಡು ಮಕ್ಕಳ ಪೈಕಿ ಹಿರಿಯ. 39ರ ಡಿಸೆಂಬರ್ 30ರಂದು ಜನಿಸಿದ. ಬ್ರಿಟನ್, ಜರ್ಮನಿಗಳಲ್ಲಿ ಸೈನಿಕ ಸೇವೆ ಸಲ್ಲಿಸಿದ ಮೇಲೆ ತನ್ನ ತಂದೆಯ ಅಧೀನದಲ್ಲಿ ಜುಡೀಯದಲ್ಲಿ ಸೈನ್ಯದಳವೊಂದರ ದಂಡಾಧಿಕಾರಿಯಾಗಿದ್ದ (67). 68ರ ಜೂನಿನಲ್ಲಿ ಚಕ್ರವರ್ತಿ ನೀರೋ ಮೃತನಾದ ಮೇಲೆ ಇವನು ತನ್ನ ತಂದೆಗೆ ಸಿಂಹಾಸನ ದೊರಕಿಸಿಕೊಡಲು ಉತ್ಸಾಹದಿಂದ ಕಾರ್ಯಮಗ್ನನಾದ. ತಂದೆ ವೆಸ್ಪೇಷಿóಯನ್ ಚಕ್ರವರ್ತಿಯಾದ ಕೂಡಲೆ ಟೈಟಸನಿಗೆ ಯೆಹೂದ್ಯರ ವಿರುದ್ಧ ಯುದ್ಧದ ನೇತೃತ್ವವನ್ನು ವಹಿಸಿಕೊಟ್ಟ. ಇವನ ನಾಯಕತ್ವದಲ್ಲಿ ಜೆರೊಸಲೆಮ್ ವಶವಾಯಿತು. ಇವನು 71ರಲ್ಲಿಗೆ ಇಟಲಿಗೆ ಹಿಂದಿರುಗಿದ. ಅಲ್ಲಿ ಟ್ರಿಬ್ಯೂನೀಸಿಯನ್ ಅಧಿಕಾರ ಪಡೆದ. ಟೈಟಸ್ ಕ್ರಮೇಣ ಸ್ಯನ್ಯದ ಮೇಲೆ ತನ್ನ ಪ್ರಭಾವ ಹೆಚ್ಚಿಸಿಕೊಂಡ. ತಂದೆಯನ್ನೇ ಉರುಳಿಸಿ ಈತ ಸಿಂಹಾಸವನ್ನಾಕ್ರಮಿಸಬಹುದೆಂಬ ಶಂಕೆಯಿತ್ತು. 2ನೆಯ ಹೆರಾಡ್ ಅಗ್ರಿಪ್ಪನ ಸೋದರಿ ಬೆರೆನೈಸಿಯೊಂದಿಗೆ ಈತ ಹೊಂದಿದ್ದ ಸಂಬಂಧದಿಂದಾಗಿ ಜನಪ್ರಿಯತೆ ಕಳೆದುಕೊಂಡ. ಆದರೂ 79ರಲ್ಲಿ ವೆಸ್ಪೇಷಿóಯನ್ ತೀರಿಕೊಂಡಾಗ ಟೈಟಸ್ ತೊಂದರೆಯಿಲ್ಲದೆ ಸಿಂಹಾಸನವನ್ನು ಹತ್ತಿದ. ಆದರೆ ಸೋದರ ಡೊಮಿಷಿಯನನೊಂದಿಗೆ ವಿರಸ ಬೆಳೆದಿತ್ತು. ಟೈಟಸ್ ಕೇವಲ ಎರಡು ವರ್ಷಕಾಲ ಆಳಿದರೂ ಅವನ ಆಡಳಿತ ಜನಪ್ರಿಯವಾಗಿತ್ತು. ಅವನದು ಆಕರ್ಷಕ ವ್ಯಕ್ತಿತ್ವ. ಆತ ಸುಸಂಸ್ಕøತ, ಉದಾರಿ, ವೀರಯೋಧ, ದುಂದುಗಾರ. 80ರಲ್ಲಿ ರೋಮ್ ಬೆಂಕಿಗೆ ತುತ್ತಾದ ಮೇಲೆ ಅವನು ಅದನ್ನು ಪುನಃ ನಿರ್ಮಿಸಿದ. ಟೈಟಸನಿಗೆ ಒಬ್ಬ ಮಗಳಿದ್ದಳು. ಟೈಟಸ್ 81ರ ಸೆಪ್ಟೆಂಬರ್ 3ರಂದು ನಿಧನನಾದ.
(ಎನ್.ಎ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ